Tuesday, 10 April 2012

ಬುದ್ದನಾಗುವ ಮುನ್ನ ನೀನು ಬಂದೆ...!



ಮನಸ್ಸೇಕೋ ಇಂದು ಉದಾಸವಾಗಿತ್ತು. ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದೆ. ಹಾಸಿಗೆಯಲ್ಲಿ ಮಲಗಿದ ರೋಗಿಗಳು, ಸ್ಟ್ರೆಚರ್‌ನಲ್ಲಿ ಕೊಂಡೊಯ್ಯುವ ದೇಹಗಳು, ನೋವಿನಿಂದ ನರಳುವ ಮನಸ್ಸುಗಳು, ಚಡಪಡಿಸುವ ಬಂಧುಗಳು.... ಎಂಥವನ ಮನಸ್ಸನ್ನೂ ವೈರಾಗ್ಯದತ್ತ ಕೊಂಡೊಯ್ಯುವುದು ಸುಳ್ಳಲ್ಲ...
ಅದೊಂದು ದಿನ ಸಿದ್ಧಾರ್ಥನಿಗೂ ಹಾಗೆಯೆ ಆಗಿರಬೇಕು ! ಹಾಗಾಗಿಯೆ ಆತ ಎಲ್ಲವನ್ನೂ ತ್ಯಜಿಸಿರಬೇಕು.... ಆತ ಬುದ್ಧ ನಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲವೆನಿಸಿತು... ಹೀಗೆಯೆ ಇದ್ದರೆ ನಾನೂ ಬುದ್ಧನಾಗುತ್ತೇನೇನೋ ಎಂದೂ ಅನಿಸತೊಡಗಿತು...
... ವೈರಾಗ್ಯ ಭಾವ ನನ್ನನ್ನೂ ನಿಧಾನಕ್ಕೆ ಆವರಿಸಿಕೊಳ್ಳತೊಡಗಿತು. ಜೀವನವೆಂದರೆ ಇಷ್ಟೇನಾ ಎಂಬಂತಹ ನೈರಾಶ್ಯ ಭಾವ !
....ಅಷ್ಟರಲ್ಲಿ  ನಿನ್ನ ಫೋನ್ ಬಂತು ನೋಡು. ಅನಿರೀಕ್ಷಿತ ಕರೆ !  ಅದೆಷ್ಟೋ ದೂರದಿಂದ ನಿನ್ನ ದನಿ ಹಾದು ಬಂದು ಕಿವಿಯಲ್ಲಿ ಮೆಲುವಾಗಿ ಉಲಿಯಿತು ಹಾಯೀ.
ಅಷ್ಟೆ  !
 ಮನಸ್ಸಿನ ಉದಾಸ, ವೈರಾಗ್ಯ, ವೇದಾಂತ ಎಲ್ಲವೂ ಕ್ಷಣಮಾತ್ರದಲ್ಲಿ ಮಾಯ ! ಮನಸ್ಸು ಒಮ್ಮೆಗೆ ಸಾವಿರ ವೋಲ್ಟ್ ಬಲ್ಬ್‌ನಂತೆ ಬೆಳಗಿತು...  
ಒಮ್ಮೆಗೆ ಆಪ್ತತೆ ಉಕ್ಕಿ ಬಂತು. ಮೊಬೈಲನ್ನು ಉತ್ಕಟವಾಗಿ ಮುಖಕ್ಕೆ ಒತ್ತಿ ಹಿಡಿದೆ. ಕಿವಿಯ ಸಮೀಪದಲ್ಲಿ ಬಿಸುಪು ಚೆಲ್ಲುತ್ತಾ ನೀನು ಪಿಸುಗತೊಡಗಿದೆ...
......
.......
ನಾನು ಬುದ್ಧನಾಗಲಿಲ್ಲ. ಏಕೆಂದರೆ ನೀನು ಬಂದೆ ನೋಡು !
ಎಲ್ಲಕ್ಕಿಂತ ಮಿಗಿಲಾಗಿ ನೀನು ನನ್ನ ಜತೆಗಿದ್ದಿ ನೋಡು.
ಎಂತಹ ವೈರಾಗ್ಯವೂ ನನ್ನ ಬಳಿ ಸುಳಿಯದು -ನೀನಿರುವ ತನಕ !!

-೦-೦-೦-

ಇದು ಮೊದಲ ಬಾರಿಯೇನಲ್ಲ , ನೀನು ಈ ರೀತಿ ನನ್ನ ಬುದ್ದನಾಗುವುದರಿಂದ ತಡೆದದ್ದು.  ಅದೆಷ್ಟೋ ಬಾರಿ ಮನಸ್ಸು ಗಾಢ ವಿಷಾದದಿಂದ ತುಂಬಿದಾಗಲೆಲ್ಲ  ಉಲ್ಲಾಸದ ಸಿಂಚನವಾಗಿ ತಂಪೆರೆದಿದ್ದಿ.  ದೇಹವು ನೋವು ಅನುಭವಿಸಬೇಕಾಗಿ ಬಂದಾಗಲೆಲ್ಲ ನೆನಪಿನಲ್ಲೇ ಪೇನ್‌ಕಿಲ್ಲರ್  ಆಗಿ ವರ್ತಿಸಿದ್ದಿ.  ಬೇಸರವು ಮನವನ್ನು ಆವರಿಸಿದಾಗಲೆಲ್ಲ ಹರ್ಷದ ಹೊನಲಾಗಿ ಹರಿದು ಬಂದಿದ್ದಿ.
ನಿನಗೆ ಗೊತ್ತಾ, ನನಗೆ ಚುಚ್ಚುಮದ್ದು ನೀಡುವಾಗ ನಿನ್ನ ನೆನಪಿಸಿಕೊಳ್ಳುತ್ತೇನೆ. ನೀನು ನಿನ್ನ ಗಾಯದ ನೋವನ್ನು ತೋಡಿಕೊಳ್ಳುವ ರೀತಿ ಸ್ಮರಿಸಿಕೊಳ್ಳುತ್ತೇನೆ. ಆ ಕೆಳತುಟಿ ಮುಂದೆ ಮಾಡಿ  ಮುಖವನ್ನೆಲ್ಲ  ಕಹಿ ಔಷ ಕುಡಿದವರಂತೆ ಮಾಡಿಕೊಂಡು , ನೋಡಿ ನನಗೆ ಗಾಯ ಆಗಿದೆ  ಎಂದು ಮುದ್ದಾಗಿ (ನೋವಿನಿಂದಲ್ಲ , ಅದುವೇ ಆಶ್ಚರ್ಯ ! )ಹೇಳುತ್ತೀಯಲ್ಲ... ಅದ ನೆನೆಸಿಕೊಂಡಾಗ ಇತ್ತ ನನಗೆ ಸೂಜಿ ಚುಚ್ಚಿದ್ದು ಗೊತ್ತೇ ಆಗುವುದಿಲ್ಲ. ಸೂಜಿ ಚುಚ್ಚುವಾಗ ನನ್ನ ಮುಖದಲ್ಲಿ ಅರಳಿದ ಕಿರುನಗು ಕಂಡು ನರ್ಸ್ ಇವನಿಗೇನು ಮರುಳಾ ಎಂದು ಬೆರಗಿನಿಂದ ನೋಡುತ್ತಾಳೆ. ಅವಳಿಗೇನು ಗೊತ್ತು ನೀನು ಇಂಜೆಕ್ಷನ್ ಚುಚ್ಚುವಾಗಿನ ನೋವನ್ನೆಲ್ಲ ಹೀರಿ ಬಿಟ್ಟಿದ್ದೀಯೆಂದು.
.....
.....
-೦-೦-೦-


ನೀನು ಸಮೀಪ ಇರದಿರುವ ಶೂನ್ಯ ಕೆಲವು ದಿನಗಳ ನಂತರ ಇಂದು ಅರಿವಾಯಿತು ನೋಡು. ಎಸ್‌ಎಂಎಸ್ ಕೂಡ ರೀಚ್ ಆಗದ ಜಾಗಕ್ಕೆ ತೆರಳಿದ್ದಿ. ಮೂರು ದಿನಗಳಾದವು ನಿನ್ನಿಂದ ಸರಿಯಾದ ಸಂದೇಶಗಳಿಲ್ಲದೆ, ದೈನಂದಿನ ಮಾತುಕತೆಯಿಲ್ಲದೆ.
ಊರೆಲ್ಲ ಬರ ಬರ ಎಂದು ಬೊಬ್ಬಿರಿಯುತ್ತಿದೆ. ನೀರಿನ ಕ್ಷಾಮ ಎಲ್ಲೆಡೆ  ಕಾಣುತ್ತಿದೆ. ಎಲ್ಲರದೂ ಒಂದೇ ಪ್ರಾರ್ಥನೆ ಮಳೆ ಬರಲಿ ಎಂದು.
ಆದರೆ ನನಗೆ ನಿನ್ನ ಸಂದೇಶದ ಬರದ ಮುಂದೆ ಬೇರಾವ ಬರವೂ ಮಹತ್ವದೆನಿಸುತ್ತಿಲ್ಲ. ಬೆಂಗಾಡಿನಲ್ಲಿ  ಅಲೆದಾಡುತ್ತಿದ್ದಂತೆನಿಸುತ್ತಿದೆ.
...ಇಂದು ಸಂಜೆ ನೀನು ಮರಳಿದೆ. ನನಗೆ ಮಾತಿಗೆ ಸಿಕ್ಕಿದೆ !
ನನ್ನ ಬರ ಕಳೆಯಿತು.
ಬರದ ನಾಡಿನಲ್ಲಿ ಒಮ್ಮೆಗೆ ಧಾರಾಕಾರ ಮಳೆ ಸುರಿದಂತೆ ಭಾಸವಾಯಿತು.
ಬರದ ನಾಡಿನ ಗಂಗೆಯಲ್ಲವೆ ನೀನು!!

Thursday, 29 March 2012

ನನ್ನಿಷ್ಟಗಳು....



ನನ್ನ ಕಂಗಳು ನನಗಿಷ್ಟ
ನೀನದರಲಿ ತುಂಬಿರುವಾಗ
ನನ್ನ ಹೆಸರು ನನಗಿಷ್ಟ
ನೀನದನು ಉಚ್ಚರಿಸುವಾಗ
ನನ್ನ ಕೈಗಳು ನನಗಿಷ್ಟ
ನೀನದನು ಸ್ಪರ್ಶಿಸುವಾಗ
ನನ್ನ ಹೃದಯ ನನಗಿಷ್ಟ
ನೀನದರಲಿ ಕೂತಿರುವಾಗ
ನನಗೆ ನಾನೇ ಇಷ್ಟ
ನೀನೇ ನನ್ನವಳಾದಾಗ
ನಾನೇ ನಿನ್ನವನಾದಾಗ

,,,,,,,,,,,,,,,,,,,,,,,,,,,,,,,


ನಿನ್ನ ನೆನಪು



ಬಿರು ಬಿಸಿಲಲಿ
ತಣ್ಣನೆಯ ಸ್ಪರ್ಶ
ನಿನ್ನ ನೆನಪು,
ಕೊರೆವ ಚಳಿಯಲಿ
ಹಿತಕರ ಬಿಸುಪು
ನಿನ್ನ ನೆನಪು,
ಜಿನುಗುವ ಮಳೆಯಲಿ
ಹನಿಗಳ ಸಿಂಪರಣೆ
ನಿನ್ನ ನೆನಪು,
ಬೆಳ್ಳಂಬೆಳಗಿನ
ಚುಮುಚುಮು ಮುಂಜಾವು
ನಿನ್ನ ನೆನಪು

Saturday, 17 March 2012

ಒಂದೆರಡು ಹನಿಗಳು



ನೆನಪಿನ ಸಂತೆಯಲ್ಲಿ
ಎಲ್ಲಿ ನೋಡಿದರಲ್ಲಿ
ಕಾಣುವುದು
ನಿನ್ನೊಡನೆಯ
ಒಡನಾಟ



ನಿನ್ನ ನೆನಪುಗಳು
ಚೂಯಿಂಗ್ ಗಮ್‌ನಂತೆ
ಎಷ್ಟು ಜಗಿದರೂ ಮುಗಿಯದು,
ಆದರೆ...
ಸವಿಯೆಂದೂ ಕಡಿಮೆಯಾಗದು

Thursday, 15 March 2012

ಹಂಬಲಿಸುವ ಹುಡುಗಿ ನನಗೆ ದೊರೆತಳು


ಮೊನ್ನೆ ಹೀಗೆನೆ ನಿನ್ನಲ್ಲಿ ಮಾತನಾಡುತ್ತಿದ್ದೆ. ನನಗೊಂದು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದು ನಿನಗೆ ತಿಳಿದಿರುವುದೆ. ಈವರೆಗೆ ಅದಕ್ಕೆ ಹಿಂಜರಿಯುತ್ತಾ ಬಂದವನು ಈಗ ಅದನ್ನು ಮಾಡಿಸುವುದೆಂದು ತೀರ್ಮಾನ ಮಾಡಿಬಿಟ್ಟಿದ್ದೇನೆ. ಅದನ್ನೆ ನಿನ್ನಲ್ಲಿ ಹೇಳಿದೆ. ಚಿಕಿತ್ಸೆ ಪಡೆದು ಬಂದ ಮೇಲೆ ನಿನ್ನನ್ನು ಇನ್ನಷ್ಟು  , ಮತ್ತಷ್ಟು ಪ್ರೀತಿಸುತ್ತೇನೆ ಹುಡುಗೀ ಎಂದು ನುಡಿದೆ.
ನೀನು ಪುಟ್ಟದಾಗಿ ನಕ್ಕುಬಿಟ್ಟೆ. ಅದೊಂದು ವಿಶಿಷ್ಟ ನಗು. ಅದನ್ನು ಯಾವ ಭಾವ ಎಂದು ವಿವರಿಸಲಾಗುವುದಿಲ್ಲ.  ಯಾರಾದರೂ ನಮಗೆ  ಗಮ್ಮತ್ತು ಪಾರ್ಟಿ ಕೊಟ್ಟು ಆಮೇಲೆ ಇನ್ನೂ ಏನಾದರೂ ಬೇಕಿದ್ರೆ ಕೇಳು ಎಂದಾಗ  ನಾವು ನಗುತ್ತೇವಲ್ಲ, ಅಂತಹ ನಗು ಎನ್ನಬಹುದು. ಆ ನಗು ಈಗಲೂ ಕಿವಿಯಲ್ಲಿ ಹಿತವಾಗಿ ಅನುರಣಿಸುತ್ತಿದೆ.  ಮುಂದಿನ ನಿನ್ನ ಮಾತು ಅದನ್ನು ದೃಢಪಡಿಸಿತು.
ಈಗಾಗಲೆ ನೀವು ನನ್ನನ್ನು ತುಂಬಾ ಪ್ರೀತಿಸುತ್ತಿದ್ದೀರಿ... ಅಷ್ಟೇ ಮಾತು. ಆ ಮಾತಿನಲ್ಲಿ ಒಂದು ಬಗೆಯ ಸಂತೃಪ್ತಿ  ತುಂಬಿತ್ತು.  ಕೃತಕೃತ್ಯತೆಯಿತ್ತು.
ನಿಜ ಹೇಳಲಾ.... ಆ ನಗು ಮತ್ತು ಆ ಮಾತು ನನಗೆ ಮೂಡಿಸಿದ ಆನಂದಭಾವ ಖಂಡಿತಕ್ಕೂ ವರ್ಣಿಸಲಸದಳ.
ಅದೊಂದು ರೀತಿ ಮೊದಲ ಬಾರಿ ಪ್ರಪೋಸ್ ಮಾಡಿದಾಗಲೇ ಆ ಬದಿಯಿಂದ ಯೆಸ್ ಉತ್ತರ ಬಂದರೆ ಅನುಭವಿಸುತ್ತೇವಲ್ಲ ಅಂತಹ ಭಾವ.
ನನ್ನ ಹುಡುಗಿ ನನ್ನ ಪ್ರೀತಿಯ ಆಳವನ್ನು ಗುರುತಿಸಿದ್ದಾಳೆ ಎಂದು ಕೊಡುವ ಸಂತೋಷ ಉಂಟಲ್ಲ , ಅದು  ನಿಜಕ್ಕೂ ವಿಶಿಷ್ಟ   ಫೀಲಿಂಗ್ ಕಣೆ.
ಹೌದು ಕಣೆ ಹುಡುಗಿ, ನನಗೆ ಪ್ರೀತಿಸಿಯಷ್ಟೇ ಗೊತ್ತು. ಉತ್ಕಟವಾಗಿ. ಅತೀವವಾಗಿ. ತೀವ್ರವಾಗಿ. ಮೆಲುವಾಗಿ, ನಯವಾಗಿ... ಇನ್ನೇನೇನೋ ಆಗಿ.
ಹಾಗೆಂದು ನನ್ನನ್ನು ನಾನು ಹೊಗಳಿಕೊಳ್ಳುತ್ತಿಲ್ಲ. ನನ್ನಿಂದ ಸಾಧ್ಯವಾಗುತ್ತಿರುವುದನ್ನಷ್ಟೆ ಹೇಳುತ್ತಿದ್ದೇನೆ.
ಹೌದು, ನಾನು ಪ್ರೀತಿಸಬೇಕಿತ್ತು. ಹಾಗೆಂದು ಅದಕ್ಕೆ ಪ್ರತಿಯಾಗಿ ನಾನು ಕೂಡ ಪ್ರೀತಿಸಲ್ಪಡಲೇ ಬೇಕು ಎಂದೆಲ್ಲ ಇತರ ಕೆಲವರಂತೆ ಆಶಿಸಿದವನಲ್ಲ. ನಾನು ಆಶಿಸಿದ್ದಿಷ್ಟೆ  ,  ನನ್ನ ಪ್ರೀತಿಯನ್ನೆಲ್ಲ ಮೊಗೆದು ಮೊಗೆದು ನೀಡಬೇಕು.... ನನ್ನ ಪ್ರೀತಿಯ ಮಳೆ ಎರೆಯಬೇಕು...  ದಾರೆ ದಾರೆ ಪ್ರೀತಿಯಲ್ಲಿ ತೊಯ್ಯಿಸಬೇಕು...
.... ಅದಕ್ಕೊಬ್ಬಳು ಗೆಳತಿ ಬೇಕಿದ್ದಳು.
ಗೆಳತಿ ಅಂದರೆ ಅಂತಿಂಥ ಗೆಳತಿಯಲ್ಲ.  ಅವಳೊಬ್ಬಳು ಅತ್ಯಂತ ವಿಶಿಷ್ಟ ಹುಡುಗಿಯಾಗಿರಬೇಕು...
...ನಿಜಕ್ಕೂ ಉತ್ಕಟವಾಗಿ ಪ್ರೀತಿಸುವಂತೆ ಮಾಡಬಲ್ಲ ಹುಡುಗಿ.  ನನ್ನ ಭಾವನೆಗಳಿಗೆ ಪ್ರೇರಣೆ ನೀಡಬಲ್ಲ ಗೆಳತಿ. ಕನಸುಗಳಿಗೆ ರಂಗು ತುಂಬಬಲ್ಲವಳು. ಕಲ್ಪನೆಗಳಿಗೆ ನೀರೆರೆಯುವವಳು. ಕಣ್ಣಿನಲ್ಲೆ ನೂರು ಮಾತು ಹೇಳಬಲ್ಲವಳು.  ಹೂಮೊಗ್ಗಿನ ಮುಗ್ಧತೆಯವಳು. ಏಳು ಮಲ್ಲಿಗೆ ತೂಕದಂತವಳು. ಮೊದಲ ಮಳೆಯ ಪುಳಕ ನೀಡುವವಳು. ಎಳೆಗರಿಕೆಯ ಮೇಲಿನ ಮಂಜಿನ ಹನಿಯಂತವಳು. ಸಂಜೆಯ ಆಗಸದ ರಂಗಿನಂತವಳು. ಹುಣ್ಣಿಮೆಯ ಚಂದ್ರನಂತವಳು.... 
ಅಂತಹ ಗೆಳತಿಗಾಗಿ ಹಂಬಲಿಸಿದ್ದು ಇಂದು ನಿನ್ನೆಯಿಂದೇನಲ್ಲ. ತಾರಣ್ಯಕ್ಕೆ ಆಗಮಿಸಿದಾಗಿನಿಂದ ಕಟ್ಟಿಕೊಂಡ ಕನಸದು. ಬೆಳೆಸಿಕೊಂಡ ಹಂಬಲವದು. ಆದರೆ ನಮ್ಮ ಬಯಕೆಯ ಕೂಸು ಸಿಗುವುದು ಅಷ್ಟು ಸುಲಭವಲ್ಲ ತಾನೆ. ನಮ್ಮ ಕಲ್ಪನೆಗೆ ಅನುರೂಪಳಾದ  ಹುಡುಗಿ ಸಿಗಲು ಏಳು ಜನ್ಮದ ಪುಣ್ಯ ಬೇಕು ಎನ್ನುತ್ತಾರಲ್ಲ.. ಅದೂ ನಿಜವೆ. 
ಆದರೆ... ನನ್ನ ಕಾಯುವಿಕೆ ವ್ಯರ್ಥವಾಗಲಿಲ್ಲ...
ನೀನು ಸಿಕ್ಕಿದೆ !!
ನನ್ನ ಬಾಳು ಕೃತಾರ್ಥವಾಯತು.
ಹಂಬಲಿಸಿದ ಹುಡುಗಿಯನ್ನು ಪ್ರೀತಿಸುವುದರಲ್ಲೂ ಅದೆಷ್ಟು ಆನಂದವಿದೆ ಎಂದು ಈಗ ಕಂಡುಕೊಳ್ಳುತ್ತಿದ್ದೇನೆ. (ಪ್ರೀತಿಸಲ್ಪಡುವ ನೀನೂ ಅಷ್ಟೆ ಆನಂದಿಸುತ್ತಿದ್ದಿ ಎಂಬುದನ್ನು ನಾನು ಅರಿತುಕೊಂಡಿದ್ದೇನೆ)
ಈಗ ನೋಡು ಪ್ರತಿದಿನವೂ ವಸಂತ !
ಗೆಳತಿಯ  ಶುಭ ಮುಂಜಾನೆಯಿಂದ ದಿನದ ಆರಂಭ.  ಶುಭ ರಾತ್ರಿಯ ಸಂದೇಶದೊಂದಿಗೆ ರಾತ್ರಿ ನಿದ್ರೆಗೆ.
ಮುಂಜಾನೆಯಿಂದ ರಾತ್ರಿಯ ಮಧ್ಯದ ಕಾಲವಿಡೀ ಹಿತ ಕೊಡುವ ನೆನಪುಗಳು , ಆತ್ಮೀಯ ಸಂದೇಶಗಳು, ಹೃದಯ ತುಂಬುವ ಆಪ್ತ ಮಾತುಕತೆ, ಮನಸ್ಸು ತುಂಬುವ ಪುಟುಪುಟು ನಗು, ದೇಹವಿಡೀ ಆವರಿಸುವ ಪ್ರೀತಿಯ ಸ್ಪರ್ಶ.... ಇನ್ನೇನು ಬೇಕು ಬದುಕಿಗೆ ಅಲ್ವೇನೇ ಹುಡುಗಿ...
ಇದು ಒಂದು ದಿನದ ಕತೆಯಲ್ಲ. ಮರುದಿನ ಮತ್ತದೇ ಪುನರಾವರ್ತನೆ....
ಈಗ ಹೊತ್ತಾಗುತ್ತ ಬಂತು.  ನಿದ್ರಿಸುವ ಸಮಯ.  ನಿನ್ನ ರೆಪ್ಪೆಗಳಿಗೆ ನಿದ್ದೆ ಮೆಲ್ಲ  ಮೆಲ್ಲಗೆ ಅಂಟಿಕೊಳ್ಳುತ್ತಿರಬಹುದು....
ನಾಳೆ ಸಿಗೋಣ...




ನಿನ್ನ ಕಣ್ಣ ರೆಪ್ಪೆಯ ಮೇಲೆ ಕುಳಿತು ಕಾಯುವೆ
ನಿನ್ನ ಕನಸುಗಳಿಗೆ ಕಾವಲನು
ಸೂರ್ಯೋದಯದಿ ಹಾರೈಸುವೆ ಮೊದಲಾಗಿ 
ಶುಭ ಮುಂಜಾನೆಯನು
ಹೃದಯ  ಸಂಪುಟದಿ ಕಾದಿಡುವೆನು
ಜೋಪಾನವಾಗಿ ನಿನ್ನ ನೆನಪುಗಳನು


Sunday, 11 March 2012

ಮುನಿಸು ನಮಗೇಕೆ ಮುಗುದೇ..



ಪ್ರೀತಿಯೆಂದ ಮೇಲೆ ಒಂದಿಷ್ಟು ಮುನಿಸೂ ಇರಲೇಬೇಕಾ ಗೆಳತೀ... ಇಲ್ಲವಾದರೆ ಅದೇಕೆ  ನಾನು ನಿನ್ನಲ್ಲಿ ಮುನಿಸು ಮಾಡುತ್ತೇನೆ, ಅದೂ ನಿನ್ನೊಡನೆ ಇನ್ನೆಂದೂ ಮುನಿಸು ಮಾಡಲಾರೆ ಎಂದು ಹೇಳಹೇಳುತ್ತಲೇ...
ಈ ಪೀಠಿಕೆ ಹಾಕಲು ಕಾರಣವಿದೆ...
ಅದೇಕೋ ಇಂದು ಸಂಜೆ ನಿನ್ನೊಡನೆ ಮಾತನಾಡುವಾಗ ಯಾವುದೋ ವಿಷಯದ ಕುರಿತು ಸ್ವಲ್ಪ ಅಭಿಪ್ರಾಯ ಭೇದ ತಲೆದೋರಿತು. (ಅದು ಮುನಿಸಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.)  ಆ ಭೇದ ಕೂಡ ಸ್ವಲ್ಪೇ ಹೊತ್ತಿನಲ್ಲಿ ಕರಗಿ ಹೋಯಿತು ಕೂಡ. (ಇಂದಿನ ಅಭಿಪ್ರಾಯ ಭೇದಕ್ಕೆ ನಾನೇ ಹೊಣೆ ಕಣೆ. ಅದೇನೋ ಸ್ವಲ್ಪ ಜೆಲಸಿ ಮೂಡಿತು ಅನ್ಸುತ್ತೆ. ನಾನೇನು ಮಾಡಲಿ ಹೇಳು, ಅಸೂಯೆಯಂತಹ ಸಂಕುಚಿತ ಮನಸ್ಸನ್ನು ಕಳಚಿಕೊಂಡು ವಿಶಾಲ ಹೃದಯಿಯಾಗಿದ್ದೇನೆ  ಎಂದೆಲ್ಲ ನನ್ನ ಬಗ್ಗೆಯೆ ಹೆಮ್ಮೆ ಪಟ್ಟುಕೊಂಡಿದ್ದೆ. ಆದರೆ ನಿನ್ನ ಕುರಿತಾದ ಬೇರಾರದೋ ಮೆಚ್ಚಿಕೆಯ ಮಾತು  ಅಥವಾ ಬೇರಾರದೋ ಕುರಿತಾದ ನಿನ್ನ ಮೆಚ್ಚಿಕೆಯ ಮಾತು  ನನ್ನಲ್ಲಿ ಅಚಾನಕ್ ಆಗಿ   ಅಸೂಯೆ ಹುಟ್ಟಿಸಿಯೇ ಬಿಡುತ್ತದೆ.  ಅದು ಸಹಜಪ್ರಕ್ರಿಯೆ. ಹಾಗಾಗಿ ಈಗ ಒಂದು ತೀರ್ಮಾನಕ್ಕೆ ಬಂದಿದ್ದೇನೆ, ನಿನಗೆ ಸಂಬಂಸಿ ನಾನು ಅಂತಹ ಅಸೂಯೆ ಮಾಡಿಕೊಳ್ಳದಿದ್ದರೆ ನಾನು ಮನದಾಳದಿಂದ ನಿನ್ನ ಪ್ರೀತಿಸುವುದೇ ಸುಳ್ಳು  ಎಂದು ಭಾವಿಸಿಕೊಂಡು ಈಗ ಆ  ಅಸೂಯೆಯನ್ನು ಮನಃಪೂರ್ವಕ ಒಪ್ಪಿಕೊಳ್ಳುತ್ತಿದ್ದೇನೆ, ಇತೀ ಶರಣಂ! ಈಗ ನನ್ನ ಪ್ರಕಾರ ಎಲ್ಲಿ ಪ್ರೀತಿಯಿರುತ್ತದೋ ಅಲ್ಲಿ ಅಸೂಯೆ ಇರಲೇಬೇಕು ಎಂಬುದು,  ೨ಕೂಡಿಸು ೨ ಅಂದರೆ ನಾಲ್ಕು ಎಂಬಂತಹ ಸಹಜ ಲೆಕ್ಕಚಾರ.  ಏನಂತೀ..)
ಈ ಪೀಠಿಕೆ ಹಾಕುತ್ತಲೇ  ನಿನ್ನೊಡನೆ ಮೂಡಿದ ಕೆಲವು ಮುನಿಸಿನ ಕ್ಷಣಗಳು ನೆನಪಾಗತೊಡಗಿದವು... ಅದೃಷ್ಟ ನೋಡು , ನಾವು ನಿಜವಾದ ಅರ್ಥದಲ್ಲಿ ಮುನಿಸಿಕೊಳ್ಳಲೇ ಇಲ್ಲ. ಮುನಿಸಿಕೊಂಡರೂ  ನಮ್ಮ ಮುನಿಸು ಸಂಬಂಧ ಕೆಡಿಸುವಷ್ಟು  ದೂರ ಸಾಗಲೇ ಇಲ್ಲ.  ಕೆಲವೇ ನಿಮಿಷಗಳಲ್ಲಿ , ಹೆಚ್ಚೆಂದರೆ ಕೆಲವೇ ಗಂಟೆಗಳಲ್ಲಿ ಮುಗಿದು ಹೋಯಿತು ನಮ್ಮ ಕೋಪತಾಪಗಳು.
ಅಂದ ಹಾಗೆ ನೀನು ಒಂದು ವಿಷಯ ಗಮನಿಸಿದ್ದಿಯಾ ಗೆಳತೀ, ನಿನ್ನೊಡನೆ ನನ್ನ ಮುನಿಸುಗಳೆಲ್ಲವೂ   ಮುಖತಃ ಇರುವಾಗ ಘಟಿಸಿದ್ದಲ್ಲ.  (ಮುಖತಃವೂ  ಜಗಳವಾದರೆ ಯಾರಾದರೊಬ್ಬರಲ್ಲಿ ಅಥವಾ ಇಬ್ಬರಲ್ಲೂ ಸಮಸ್ಯೆಯಿದೆಯೆಂದೇ ಅರ್ಥ. ನೋಡಿದ್ಯಾ ನಮ್ಮಲ್ಲಿ ಅಂಥದು ಇಲ್ಲವೇ ಇಲ್ಲ.) ನಿನ್ನ ನೋಡಿದೊಡನೆ, ನಿನ್ನ ಸಮ್ಮುಖದಲ್ಲಿ  ನನ್ನ ಮುನಿಸೆಲ್ಲವೂ ಬಾಯಲ್ಲಿಟ್ಟ  ಐಸ್‌ಕ್ರೀಂನಂತೆ ಕರಗಿ ಹೋಗುವುದು ಸುಳ್ಳಲ್ಲ. ನಾನು ನಿನ್ನೊಡನೆ ರೇಗಿದ್ದೆಲ್ಲವೂ ಫೋನಿನಲ್ಲಿ ಮಾತ್ರ. ಅದರಲ್ಲೂ ಮುಖ್ಯವಾಗಿ ನಿನ್ನ ಎಸ್‌ಎಂಎಸ್‌ಗಳನ್ನೆಲ್ಲ  ತಪ್ಪಾಗಿ ಅರ್ಥೈಸಿಕೊಂಡು  ಅಥವಾ ಬಾರದಿರುವ ನಿನ್ನ ಸಂದೇಶಗಳಿಗೆಲ್ಲ ತಪ್ಪರ್ಥ ಮಾಡಿಕೊಂಡು. ಅದು ಕೋಪಕ್ಕಿಂತಲೂ ಹೆಚ್ಚಾಗಿ  ಅಸಹನೆ ಎನ್ನಬಹುದು. (ಬಹುತೇಕ ಬಾರಿ ನನ್ನ ತಪ್ಪರ್ಥಗಳೇ ಕಾರಣವಾಗಿದ್ದರೂ ಕೆಲವು ಬಾರಿ ನಿನ್ನ ತಪ್ಪುಗಳೂ ಇರಲಿಲ್ಲವೆಂದಲ್ಲ. ಆದರೆ ಅದು ನಾನು ಗಂಭೀರವಾಗಿ ತೆಗೆದುಕೊಳ್ಳುವಂತಹುದಲ್ಲ ಆಯ್ತಾ ಮುದ್ದೂ....! ) ಹಾಗಿದ್ದರೂ ಬಹಳಷ್ಟು ಸಂದರ್ಭಗಳಲ್ಲಿ  ನನ್ನ ಅಸಹನೆ ವ್ಯಕ್ತಪಡಿಸುತ್ತಿರಲಿಲ್ಲ. ಅದರಿಂದ ನಿನಗೆ ನೋವಾದರೆ ಎಂಬ ಕಾರಣಕ್ಕೆ. ಆದರೂ ಕೆಲವೊಮ್ಮೆ ನನ್ನ ಹದ್ದು ಮೀರಿ ಭಾವನೆಗಳು ಹೊರಗೆ ಉಕ್ಕಿ ಬಿಡುತ್ತಿದ್ದವು. ಬಳಿಕ ನೀನು ಕಣ್ಣೀರು ತುಂಬುತ್ತಿದ್ದಿ. ಅಲ್ಲಿಗೆ ಮುಗಿಯಿತು ನನ್ನ ಕತೆ. ಅತೀವವಾಗಿ ಮರುಗುತ್ತಿದ್ದೆ. ಕೊರಗುತ್ತಿದ್ದೆ. ರಾಜಿಗೆ ಹಂಬಲಿಸುತ್ತಿದ್ದೆ. ನೀನು ಮುಖತಃ ಸಿಕ್ಕ ಕ್ಷಣದಲ್ಲೇ ಮುಗಿಬಿದ್ದು ರಾಜಿಗೆ ಕೈ ಚಾಚುತ್ತಿದ್ದೆ. ನೀನೂ ಅಷ್ಟೇ! ಕಿಂಚಿತ್ತೂ ಬಿಗುಮಾನವಿಲ್ಲದೆ, ಎಳ್ಳಷ್ಟೂ ಬೇಸರವಿಟ್ಟುಕೊಳ್ಳದೆ  ರಾಜಿಯ ಮುದ್ದು ನಗು ಚೆಲ್ಲುತ್ತಿದ್ದೆ.
ಅದೊಂದು ಘಟನೆ ನನಗಿನ್ನೂ ನೆನಪಿದೆ. ನಿನ್ನ ಬರ್ತ್‌ಡೇ  ಸ್ವೀಟ್‌ನ್ನು ನನಗೆ ಕೊಟ್ಟೇ ಇರಲಿಲ್ಲ. ನಿಜ ಹೇಳಬೇಕೆಂದರೆ ಅದನ್ನು ನಾನು ವಾರಗಳ ಕಾಲ ಗಮನಿಸಿಯೂ ಇರಲಿಲ್ಲ. ಗೆಳತಿಯ  ಸಂತೋಷವೇ ಮುಖ್ಯವಾದವನಿಗೆ ಅದೊಂದು ದೊಡ್ಡ ವಿಷಯವಾಗಿರಲೇ ಇಲ್ಲ. ಆದರೆ ಅದೊಂದು ದಿನ  ಫೋನ್‌ನಲ್ಲಿ ಮಾತನಾಡುತ್ತಿದ್ದಂತೆ  ಸಡನ್ನಾಗಿ ನೀನು ನನಗೆ ಸ್ವೀಟ್ ಕೊಟ್ಟಿಲ್ಲವೆಂದು ಹೊಳೆಯಿತು. ಅದಕ್ಕೆ ಕಾರಣ ನೀನು ಕ್ಲಾಸ್‌ಮೇಟ್‌ಗಳಿಗೆಲ್ಲ ಸ್ವೀಟ್ ಕೊಟ್ಟ ಬಗ್ಗೆ ಉಲ್ಲೇಖಿಸುತ್ತಿದ್ದುದು. ಅದೇಕೋ ಅಸಹನೆಯಾಗತೊಡಗಿತು. ಹಠಾತ್ತನೆ ಮನಸ್ಸಿನಲ್ಲಿ ಬೇಗುದಿ ಹೊತ್ತಿಕೊಂಡಿತು.  ಅದನ್ನೆ ನಿನ್ನಲ್ಲಿ  ತೋಡಿಕೊಂಡೆ. ಹಿಂದಿನ ವರುಷವೂ ನನಗೆ ಸ್ವೀಟ್ ಕೊಟ್ಟೇ ಇಲ್ಲವೆಂಬುದನ್ನು ನೆನಪಿಸಿದೆ...
ಮರುದಿನ ನೀನು ಸ್ವೀಟ್ ಹಿಡಿದುಕೊಂಡು ಬಂದೆ. ಹಿಂದಿನ ದಿನದ ಬೇಗುದಿ ಇನ್ನೂ  ಪೂರ್ಣ ಆರಿರದ  ನಾನಾದರೋ  ನೀನು ಕೊಡುವುದಿದ್ದರೆ ಅಂದೇ ಕೊಡಬೇಕಿತ್ತು. ಈಗ ಕೊಟ್ಟು ತಪ್ಪು ಮಾಡಿದೆ. ನಾನು ಇದನ್ನು ಕೇಳಿ ಪಡಕೊಂಡಂತೆ ಆಯಿತು  ಎಂದು ನುಡಿದೆ.

ಆ ಕ್ಷಣವೇ ನಾನು ಮಾತನಾಡಿದ್ದು ತಪ್ಪಾಯಿತು ಎಂಬುದು ಅರಿವಾಯಿತು.  ನಿನ್ನ  ಮುಖ ಹಠಾತ್ತನೆ ಕಪ್ಪಿಟ್ಟಿತು. ಕಣ್ಣುಗಳು , ಆ ಸುಂದರ ಅಗಲ ಅಗಲ ಕಣ್ಣುಗಳು, ನನ್ನ ಮುದ್ದು ಮುದ್ದು ಕಣ್ಣುಗಳು ,  ಹನಿ ತುಂಬಿಕೊಳ್ಳತೊಡಗಿದವು.
..... ಮೈ ಗಾಡ್! ಇದೇನು ಮಾಡಿಬಿಟ್ಟೆ ನಾನು ?!
ತುಂಬಾ ತುಂಬಾ ಕೆಟ್ಟದೆನಿಸಿತು. ನನ್ನ ಮೇಲೆಯೆ ರೇಜಿಗೆಯಾಯಿತು. ಕೂಡಲೇ ಸ್ವೀಟ್ ಪಡಕೊಂಡೆ.
ಸ್ವಲ್ಪ ಹೊತ್ತಿನ ಬಳಿಕ ಫೋನಿನಲ್ಲಿ ಸಿಕ್ಕಿದೆ ನೀನು. ನನ್ನ ಕೃತ್ಯ ಸಮರ್ಥಿಸಿಕೊಳ್ಳುವಂತೆ ನಾನು ಹೇಳಿದ ಮೇಲಷ್ಟೇ ನೀನು ಸ್ವೀಟ್ ಕೊಡಬಾರದಿತ್ತು. ಅದರ ಬದಲು ಕೊಡದಿದ್ದರೂ ನಡೆಯುತ್ತಿತ್ತು. ನಾನು ಹೇಳಿದ ಮೇಲೆಯೆ ನಿನಗೆ ನೆನಪಾಯಿತು ಎಂಬುದು ಆಪ್ತತೆಯ  ಸಂಕೇತವಲ್ಲ ಎಂದೆಲ್ಲ ನನ್ನ ಚಿಂತನೆಯ ಧಾಟಿ ಹರಿಸಲಾರಂಭಿಸಿದೆ.
ಮುಂದಿನ ಕ್ಷಣ  ನಿನ್ನಿಂದ ಬಂದ ಒಂದೇ ಒಂದು ಸರಳ ಮಾತು ನನ್ನ ಸಿದ್ಧಾಂತದ ಬೊಗಳೆಯನ್ನೆಲ್ಲ ಸೋಲಿಸಿಬಿಟ್ಟಿತು. ನನಗೆ ಆ ರೀತಿಯಲ್ಲೆಲ್ಲ ಚಿಂತಿಸಿ ಗೊತ್ತಿಲ್ಲ. ಅಂತಹುದೆಲ್ಲ ಆಲೋಚನೆ ನನಗೆ ಹೊಳೆಯುವುದೇ ಇಲ್ಲ. ಅಂದು ಕೊಡದೆ ತಪ್ಪು ಮಾಡಿದೆ. ಅದನ್ನು ಈಗ ಕೊಡ್ತಿದ್ದೇನೆ  ಎಂದಷ್ಟೇ ನೀನು ಹೇಳಿದ್ದು.   ತಕ್ಷಣ ನಾನು ಮಾತು ನಿಲ್ಲಿಸಿದೆ. ಕ್ಷಮೆ ಕೇಳಿದೆ.
ನಿನಗೆ ಗೊತ್ತಿಲ್ಲ , ಆ ಒಂದು ಸರಳ ಮಾತಿನಿಂದ ನೀನು ಅದೆಷ್ಟು ಬದಲಾವಣೆಯನ್ನು ನನ್ನಲ್ಲಿ ತಂದಿದ್ದಿ ಎಂದು. 
ಆ ಒಂದು ಮಾತನ್ನು ಈಗಲೂ ನೆನಪಿಟ್ಟುಕೊಂಡಿದ್ದೇನೆ. ನಿರ್ವ್ಯಾಜ   ಪ್ರೀತಿಯ ಮುಂದೆ ಇಂತಹ ತರ್ಕ, ಚಿಂತನೆಗಳೆಲ್ಲ ಅದೆಷ್ಟು ಅರ್ಥಹೀನ ಎಂದು ಅಂದು ಅರ್ಥ ಮಾಡಿಕೊಂಡೆ .
ಆ ಬಳಿಕ ನಾನು ಪ್ರೀತಿಗೆ ಸಂಬಂಸಿ ತರ್ಕಗಳನ್ನೆಲ್ಲ ಸಾಧ್ಯವಾದಷ್ಟು ಬದಿಗೆ ಸರಿಸುತ್ತಿದ್ದೇನೆ. ತರ್ಕರಹಿತವಾಗಿ ಮುಗ್ಧವಾಗಿ ಪ್ರೀತಿಸುವುದೇ ಅದೆಷ್ಟು ನಿರ್ಮಲ ಎಂದು ಅರಿತುಕೊಂಡಿದ್ದೇನೆ. ಏಕಾಗಿ ಪ್ರೀತಿಸಿದೆ, ನಾನು ಹಾಗೇಕೆ ಮಾಡಿದೆ, ಹೀಗೇಕೆ ಮಾಡಬಾರದಿತ್ತು  ಎಂದೆಲ್ಲ ಚಿಂತಿಸಿಕೊಂಡು, ಕೊರಗಿಕೊಂಡು ಸಂತೋಷ ಹಾಳು ಮಾಡಿಕೊಳ್ಳುವ ಬದಲಾಗಿ ಸಿಗುವ ಅಪರೂಪದ ಪ್ರೀತಿಯನ್ನು  ಬೊಗಸೆ ತುಂಬಿ ತುಂಬಿ ಕುಡಿಯುವುದು ಹೇಗೆ ಎಂದು ನೋಡಬೇಕು ಅಲ್ವೇನೆ.
ಪ್ರತಿಯೊಂದನ್ನೂ ನನ್ನದೊಬ್ಬನದೇ ಆಯಾಮದಲ್ಲಿ ನೋಡುವುದು ತಪ್ಪು ಎಂಬುದು ಕೂಡ ನಾನು  ನಿನ್ನಿಂದ ಕಲಿತುಕೊಂಡ ಸತ್ಯ.  ಹಾಗಾಗಿಯೆ ನನಗೆ ಅಸಹನೆಗೊಳ್ಳುವ ಪ್ರಸಂಗ ಸಂಭವಿಸಿದಾಗಲೆಲ್ಲ ನಿನ್ನ  ದೃಷ್ಟಿಕೋನದಿಂದಲೂ   ಚಿಂತಿಸತೊಡಗುತ್ತೇನೆ.. ಆಗ ನೀನು ಅಸಹನೆ ಮೂಡಿಸುವ ಯಾವುದೇ ಕಾರ್ಯವೆಸಗಿದ್ದರೂ ಅದು ಅನಿವಾರ್ಯವಾಗಿತ್ತು ಎಂಬ ಸತ್ಯದ ಅರಿವಾಗುತ್ತದೆ.
ನಿಜ ಗೆಳತಿ, ನಿನ್ನ ನಿರ್ಮಲ, ಮುಗ್ಧ , ಅಮಾಯಕ ಪ್ರೀತಿ ನನಗೆ ಅದೆಷ್ಟು ಪಾಠ ಕಲಿಸಿದೆಯೆಂಬುದು ನಿನಗೆ ತಿಳಿದಿಲ್ಲ. ಹಲವು ತಪ್ಪುಗಳನ್ನು ನಾನು ಪುನರಾವರ್ತಿಸದಿರಲು ಅದು ನನಗೆ ನೆರವಾಗಿದೆ. ಹಲವು ತಪ್ಪು ಕಲ್ಪನೆಗಳು ಉದಿಸದಂತೆ ತಡೆದಿವೆ ಗೊತ್ತಾ...
ಹಾಗಾಗಿಯೆ ಇತ್ತೀಚಿನ ದಿನಗಳಲ್ಲಿ ನನ್ನ ನಿನ್ನ ನಡುವೆ ಮುನಿಸೇ ಮೂಡುತ್ತಿಲ್ಲ. ಹಿ.. ಹಿ.. ಹಿ..
ಹಾಗೆಂದು ನಾನು ನಿನ್ನಲ್ಲಿ ಈಗ ಮುನಿಸಿಕೊಳ್ಳುತ್ತಲೇ ಇಲ್ವೇ. ಹಾಗೇನೂ ಹೇಳೋಲ್ಲ. ಆಗೊಮ್ಮೆ ಈಗೊಮ್ಮೆ ಪುಟ್ಟ ನಸುಮುನಿಸು ಇದ್ದೇ ಇರುತ್ತದೆ ಅಲ್ವೆ ಗೆಳತಿ. ಆದರೆ ಊಟಕ್ಕೆ ನಂಜಿಕೊಳ್ಳಲು ಉಪ್ಪಿನಕಾಯಿ ಬೇಕಿರುವಂತೆ ಅದೂ ಬೇಕೇಬೇಕಲ್ಲವೆ. ಇನ್ನೂ ಚೆನ್ನಾಗಿ  ಹೇಳುವುದಾದರೆ ಅದೆಲ್ಲ ಐಸ್‌ಕ್ರೀಂ ಮೇಲಿನ ಚೆರ್ರಿ ಹಣ್ಣಿನಂತೆ .
ಮುನಿಸಿನ ನಂತರದ ರಾಜಿ ನೀಡುವ ಖುಷಿ ಉಂಟಲ್ಲ ,  ಅದು ಇನ್ನೊಂದು ಬಗೆಯ ಸಿಹಿ. ಅದಕ್ಕೂ ವಿಶೇಷ ಸವಿತನ ಇದೆಯಾದರೂ, ಮುನಿಸಿನ ಕಹಿ ಕೂಡ ತೀವ್ರವೇ ಆಗಿರುವುದರಿಂದ ಆ ವಿಶೇಷ ಸವಿತನ ಕಳಕೊಳ್ಳಲು ನಾನು ಸಿದ್ಧನಾಗಿದ್ದೇನೆ. ಸೋ, ಇನ್ನೆಂದೂ ಬೇಡ ಮುನಿಸು.
 ಮುನಿಸು ತರವೇ ಮುಗುದೇ ... ಎಂದು ಕವಿ ಬರೆದ.
ಹೌದು, ಮುನಿಸು ಬೇಡ ಗೆಳತೀ ನಮ್ಮೊಳಗೆ  ಎಂದು ನಾನು ಕೋರುತ್ತಿದ್ದೇನೆ.

Thursday, 8 March 2012

ನನ್ನೊಲವಿನ ಬೆಳದಿಂಗಳ ಬಾಲೆ...



ಈಗ ಕೆಲವೇ ನಿಮಿಷಗಳ ಮೊದಲು ಟೆರೇಸ್ ಮೇಲೆ ನಿಂತಿದ್ದೆ. ತಣ್ಣನೆ ಗಾಳಿ  ಹಿತವಾಗಿ ಬೀಸುತ್ತಿತ್ತು. ಮೇಲೆ  ಆಕಾಶದಲ್ಲಿ  ಚಂದ್ರ ನಗ್ತಾ ಇದ್ದ.
ಇಂದು ಹುಣ್ಣಿಮೆ . ಹೋಳಿ ಹುಣ್ಣಿಮೆ. ಹಾಗೆಂದು ಚಂದ್ರನೇನೂ ರಂಗು ಮೆತ್ತಿಸಿಕೊಂಡಿರಲಿಲ್ಲ. ಬೆಳ್ಳಗೇ ಇದ್ದ , ಬಟ್ಟಲಿನಲ್ಲಿ ಹರಡಿ ನಿಂತ ವೆನಿಲಾ ಐಸ್‌ಕ್ರೀಂನಂತೆ.
ತಕ್ಷಣ ನೆನಪಾಯಿತು ಕೆಲವೇ ಗಂಟೆಗಳ ಮೊದಲಿನ ಆ ಪಯಣ..
ಅದು ಅತ್ಯಂತ ಸುಂದರ ಪಯಣ. ಅದೊಂದು ಗುಡ್ಡದ ಮೇಲೆ ಸ್ಕೂಟರ್‌ನಲ್ಲಿ ನಾನು ಹೋಗುತ್ತಿದ್ದೆ. ನಿರ್ಜನ ರಸ್ತೆ. ಹತ್ತಿರದಲ್ಲೆಲ್ಲೂ ದೀಪದ ಬೆಳಕಿಲ್ಲ. ಪಕ್ಕದ ಗುಡ್ಡದಿಂದ ಸುಂದರ ಚಂದಿರ ಒಂದಿಷ್ಟು ಮೇಲೆ ಬಂದಿದ್ದನಷ್ಟೆ. ಹಾಗಾಗಿ ಇಷ್ಟಗಲ ದೊಡ್ಡದಾಗಿದ್ದ.  ರಸ್ತೆ ಮೇಲೆಲ್ಲ , ದೂರದ ತನಕ ಹರಡಿ ನಿಂತ ಮರಗಿಡಗಳ ಮೇಲೆಲ್ಲ ಹಾಲು ಚೆಲ್ಲಿದಂತೆ ಬೆಳದಿಂಗಳು...
ಎಂಥಾ ಸುಂದರ ಪ್ರಸಂಗ. ಕವಿ ಕಲ್ಪನೆ ಕೆರಳಿಸುವ ದೃಶ್ಯ.
ಎಲ್ಲಕ್ಕೂ ಪುಟವಿಟ್ಟಂತೆ...
... ಜತೆಯಲ್ಲಿ ನೀನಿದ್ದೆ !!
...ನನ್ನ ಹಿಂದೆ ಮೆತ್ತಗೆ ಮತ್ತೊಂದು ಬೆಳದಿಂಗಳ ಮುದ್ದೆಯಾಗಿ ಕೂತಿದ್ದೆ- ಚಂದಿರ ಭೂಮಿಗೆ ಸುರಿದ ಬೆಳದಿಂಗಳೆಲ್ಲ  ಅಚ್ಚಿನಲ್ಲಿ ಸುರಿಯಲ್ಪಟ್ಟು ಸುಂದರ ಬೆಳದಿಂಗಳ ಬಾಲೆಯಾದಂತೆ !!
ನೀನಾದರೋ ಜಗವನ್ನೆ ಮರೆತಂತೆ ತನ್ಮಯಳಾಗಿ ನನ್ನ ಬೆನ್ನಿಗೆ ಆತುಕೊಂಡಿದ್ದೆ ,  ಆಪ್ತವಾಗಿ. ನಿನ್ನ  ಆ ಮುದ್ದು ಮುದ್ದು ಮುಖ ನನ್ನ ಕಿವಿಯ ತೀರಾ ಸಮೀಪ ಬಂದು ಭುಜದ ಮೇಲೆ ಹಾಯಾಗಿ ಕೂತಿತ್ತು. ಸ್ವಲ್ಪವೇ ಮುಖ ತಿರುಗಿಸಿ ನಿನ್ನತ್ತ ವಾರೆನೋಟ ಬೀರಿದೆ ನೋಡು, ಆ ಮಂತ್ರಮುಗ್ಧ ನಗೆ ಚೆಲ್ಲಿದಿ. ತುಟಿ ತೆರೆಯದೆ ಬಿರಿದ ನಗು. ತುಟಿಗಿಂತಲೂ ಹೆಚ್ಚು ಕಣ್ಣಿನಲ್ಲೇ ಅರಳಿದ ನಗು .  ದಿಗ್ಗನೆ ನನ್ನ ಹಿಂದೆ ಮಿಂಚು ಹತ್ತಿದಂತಾಯಿತು...
ಮೇಲೆ ಚಂದಿರನಿಗೂ ಅಸೂಯೆ ಹುಟ್ಟಿರಬೇಕು. ಒಮ್ಮೆಗೆ ತುಸು ಮಂಕಾದನೇನೋ... ಮತ್ಸರದ ಮುದ್ದೆ ಅವನು. ಅವನನ್ನು ಮರೆತುಬಿಡುವ. 
ಸ್ಕೂಟರ್‌ನ ಕನ್ನಡಿಯನ್ನು ಸ್ವಲ್ಪ ಸರಿಪಡಿಸಿಕೊಂಡೆ, ನಿನ್ನ ಮುಖ ಕಾಣುವಂತೆ. ನನ್ನ ಭುಜದಿಂದ ಇಣುಕುವ ನಿನ್ನ ಮುಖದ ಭಾಗವಷ್ಟೆ ಕಂಡಿತು. ಮೂಗಿನಿಂದ ಮೇಲ್ಭಾಗ ಮಾತ್ರ. ಪುಟ್ಟ  ಚಂದ್ರನ ತುಂಡಿನಂತೆ. ನನ್ನ ಹಿಂದೆ ಪಾಡ್ಯ, ಬಿದಿಗೆ , ತದಿಗೆ ಚಂದ್ರ ಕೂತಿದೆ ಎಂದು ಹೇಳಿದೆ ನಾನು. ಆದರೆ ಅದರಲ್ಲಿ ಖಂಡಿತಾ ಉತ್ಪ್ರೇಕ್ಷೆಯಿರಲಿಲ್ಲ. ಹಾಗೆಯೆ ಕಾಣುತ್ತಿತ್ತು  ನಿನ್ನ ಆ ಭಾಗಶಃ ಮುಖ...
 ಆ ಸುಂದರವಾದ ಇಷ್ಟಿಷ್ಟಗಲದ ಎರಡು ಕಣ್ಣುಗಳು...  ಹೊಳೆಯುವ ಚಂದ್ರನನ್ನು ತಮ್ಮಲ್ಲೇ ತುಂಬಿಕೊಂಡಂತೆ ಹೊಳೆಯುತ್ತಿದ್ದವು...
ಭುಜದಿಂದ ಇಣುಕುವ ಆ ಮುಖವು ಒಮ್ಮೆಗೆ ಗೂಡಿನೊಳಗಿಂದ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಇಣುಕವ ಪುಟ್ಟ ಗುಬ್ಬಿಯನ್ನು ನೆನಪಿಸಿತು.
ನಿಜವಾಗಿಯೂ ನೀನು ಪುಟ್ಟ ಗುಬ್ಬಚ್ಚಿ ಕಣೆ...ಆಪ್ತವಾಗಿ ಆವರಿಸಿ ಹಿಡಿದು ಮುದ್ದು ಮಾಡಬೇಕೆಂಬ ತುಡಿತ ಮೂಡಿಸುವ ಗುಬ್ಬಿ ಮರಿ.
ಹೇ, ಗೆಳತೀ ನೀನು ಬರಿಯ ಕಲ್ಪನೆಯಲ್ಲಿ  ಮಾತ್ರ ರಮ್ಯ ಲೋಕ ಸೃಷ್ಟಿಸುವುದಲ್ಲ , ವಾಸ್ತವದಲ್ಲೂ ಅಂತಹುದೇ ರಮ್ಯ ಲೋಕವನ್ನು  ಕಣ್ಣ ಮುಂದೆ ತೆರೆದಿಡುತ್ತಿ... ಅದೇ ನಿನ್ನ ವಿಶೇಷತೆ ಕಣೆ.
ನೆನಪಿದೆಯಾ ಗೆಳತಿ, ನಾನು ನಿನ್ನೊಂದಿಗೆ ಹಂಚಿಕೊಂಡ ಆ ಸುಂದರ ಕನಸು. ಅದೆಷ್ಟೋ  ಬಾರಿ ನಾನು ನಿನ್ನಲ್ಲಿ ಅದನ್ನು ಹಂಚಿಕೊಂಡಿರಬೇಕು. ನಿನಗೆ ಕೇಳಲು ಬೋರ್ ಆದರೂ ನನಗೆ ಹೇಳಲು ಬೋರ್ ಇಲ್ಲ . ಇಂದಂತೂ ಹೇಳಲೇ ಬೇಕು...
... ಹುಣ್ಣಿಮೆಯ ರಾತ್ರಿಯಾಗಿರಬೇಕು. ಸುಂದರ ಗುಡ್ಡದ ಮೇಲೆ ನಾನು ಕೂತಿರಬೇಕು. ಪಕ್ಕದಲ್ಲೆ ನೀನಿರಬೇಕು. ಹಿಟ್ಟಿನ ಮಳೆ ಸುರಿಯುತ್ತಿದೆಯೇನೋ ಎಂಬಂತಹ ಬೆಳದಿಂಗಳು. ಕಣ್ಣ ಮುಂದೆಲ್ಲ ವಿಸ್ತಾರಕ್ಕೆ ಹರಡಿಕೊಂಡ ಹಸಿರು ಕಣಿವೆ. ಅದರಲ್ಲೂ ಹಾಲಿನ ಧಾರೆಯಂತೆ ಸುರಯುತ್ತಿರುವ ಬೆಳದಿಂಗಳು. (ಪ್ಲೀಸ್,... ಹಾಗೇ ಬರಿದೇ ಓದುತ್ತಾ ಹೋಗಬೇಡ, ಒಂದಿಷ್ಟು ಕಲ್ಪಿಸುತ್ತಾ ಹೋಗು) ಆ ರಾತ್ರಿ  ಜಗತ್ತಿನಲ್ಲಿ ಬೇರಾರೂ ಇಲ್ಲ.  ನಾನು ಮತ್ತು ನೀನು ಮಾತ್ರ. ಮಾತು ಮರೆತು , ಕೈಯಲ್ಲಿ ಕೈ ಬೆರೆಸಿಕೊಂಡು , ಸ್ಪರ್ಶ ಮಾತ್ರದಲ್ಲೇ ಅಲೌಕಿಕ ಅನುಭೂತಿ  ಹಂಚಿಕೊಂಡು ಕೂತಿರುವ ನಾವಿಬ್ಬರು... ನಿನ್ನ ನಯವಾದ ಕೆನ್ನೆ, ಸೊಂಪು ತಲೆಕೂದಲ  ಮೇಲೆಲ್ಲ  ಬೆಳದಿಂಗಳ ಲೇಪ...
ಹೇ, ನಾನು ಯಾವುದೋ ಭಾವಲೋಕಕ್ಕೆ ತೇಲಿಹೋಗುತ್ತಿದ್ದೇನೆ...
ಎಂಥಾ ಭಾವ ತುಂಬುತ್ತಿ ಮಾರಾಯ್ತಿ ನೀನು, ಎಂಥಾ ಅನುಭೂತಿ ನೀಡುತ್ತಿ...
ನಾನೀಗ ಆ ರಮ್ಯ ಲೋಕದಲ್ಲಿ ಇದ್ದೇನೆ. ಸದ್ಯಕ್ಕೆ ಅದರಿಂದ ಹೊರಬರುವ ಇಷ್ಟವಿಲ್ಲ....
ಗುಡ್‌ನೈಟ್ ಕಣೆ. ಹೋಳಿಯ ರಂಗಿನ ಕನಸು ನಿನ್ನದಾಗಲಿ.



Tuesday, 6 March 2012


ಹಾಯ್,
ಕೆಲವು ದಿನಗಳಾದವಲ್ಲವೆ ಇಲ್ಲಿ ಹಾಜರಾಗದೆ.
ಇದೀಗ ನಿನ್ನೊಂದಿಗಿನ ಒಂದಿಷ್ಟು  ಸುಂದರ ನೆನಪುಗಳನ್ನು ಬುತ್ತಿ ಕಟ್ಟಿಕೊಂಡು ಮತ್ತೆ ಹಾಜರಾಗುತ್ತಿದ್ದೇನೆ.
ಇಂದು ಸಂಜೆ ನಿನ್ನ ಮುಖವು  ಮೂಡಿಸಿದ ಆ ಭಾವದೀಪ್ತಿ  ಈ ಬರಹವನ್ನು ಮೂಡಿಸುವಂತಹ ತುಡಿತ ಉಂಟುಮಾಡಿದೆ. ಆ ಅದ್ಭುತ ಸುಂದರ ಕ್ಷಣವನ್ನು ಅಚ್ಚಳಿಯದೆ ಉಳಿಸುವಂತಹ ಪುಟ್ಟ ಯತ್ನವಿದು. ನನ್ನ ಮನದಲ್ಲಾದರೋ ಅದು ಅವಿಸ್ಮರಣೀಯವೆ. ಆದರೂ ಅದಕ್ಕೊಂದು ಅಕ್ಷರ ರೂಪ ಕೊಟ್ಟು ನಿನ್ನೊಂದಿಗೂ ಹಂಚಿಕೊಳ್ಳಬಾರದೇಕೆ ಎಂಬ ಭಾವದಿಂದ ಉದಿಸಿದ್ದು ಇದು.
ಆ ನೋಟ ಈಗಲೂ ಕಣ್ಣ ಮುಂದಿದೆ. ಪಶ್ಚಿಮದಲ್ಲಿ ಸೂರ್ಯ ಮುಳುಗಲು ಇನ್ನೇನು ತಯಾರಾಗಿದ್ದ.  ಇಡೀ ಆಕಾಶವು ಹೊಂಬಣ್ಣದಿಂದ ತುಂಬಿತ್ತು. ಥೇಟ್ ಚಿನ್ನದ ರಂಗು. ಸೂರ್ಯ ಕೆಂಪಾಗುವ ವೊದಲಿನ ಕ್ಷಣವದು. ಅಂತಹ ಪ್ರಖರ ಹೊನ್ನಿನ ಬಣ್ಣ ಯಾವಾಗಲೂ ಮೂಡುವುದಿಲ್ಲ. ಆದರೆ ಇಂದು ಮಾತ್ರ ಹಾಗಿತ್ತು.
ಹಾಗೆಯೇ  ನಾನು ಸನಿಹ ಕೂತಿದ್ದ ನಿನ್ನತ್ತ ದೃಷ್ಟಿ ತಿರುವಿದೆ ನೋಡು, ಪಕ್ಕದಲ್ಲೆ ಸ್ವರ್ಣ ಪುತ್ಥಳಿ ಕಂಡಂತಾಯಿತು.
ನಿನ್ನ ಮುಖದ ಮೇಲೆ ಸೂರ್ಯನ  ಆ ಹೊಂಗಿರಣಗಳು ನರ್ತಿಸುತ್ತಿದ್ದವು. ನಯವಾದ ಕೆನ್ನೆಯ ಮೇಲೆ  ಸೂರ್ಯರಶ್ಮಿಗಳು ಬಿದ್ದು ಅಲ್ಲಿಂದ ಪ್ರತಿಫಲಿಸುತ್ತಿದ್ದವು. ವೊದಲೇ ಸುಂದರ  ಬಣ್ಣದ ನಿನ್ನ ಮುಖವು ಚಿನ್ನದ ಲೇಪ ಮೆತ್ತಿಕೊಂಡಂತೆಯೆ ತೋರುತ್ತಿತ್ತು.
ಮತ್ತು, ಆ ಎರಡು ಕಂಗಳಲ್ಲಿ ಇನ್ನೆರಡು ಹೊನ್ನ ಸೂರ್ಯಗಳು ಮೂಡಿದ್ದವು.
ವೊದಲೇ ಪ್ರಕಾಶಮಾನವಾದ ಮಿನುಗು ಕಣ್ಣುಗಳು. ಅದರಲ್ಲಿ ಎರಡು ಚಿನ್ನದ ಗೋಳಗಳು. ವಾಹ್ !
ಅದೇ ಕ್ಷಣ ನೀನೂ ನನ್ನತ್ತ ತಿರುಗಿ ಒಂದು ನಗು ಚೆಲ್ಲಿದೆ. ಅಲ್ಲಿಗೆ ಆ ಸುಂದರ ದೃಶ್ಯಕ್ಕೆ ಅಮೋಘ ಭಾಷ್ಯ ಬರೆದಂತಾಯಿತು.
ಅತ್ಯಂತ ಸುಂದರವಾದ,  ನಿರ್ಮಲವಾದ ನಗು ಅದು. ಜಗತ್ತನ್ನೇ ಪ್ರೀತಿಸುತ್ತಿದ್ದೇನೆ ಎನ್ನುವಂತಹ  ನಗು.
ಬಹುಶಃ ಸೂರ್ಯನಿಗೂ ಆ ನಗುವಿನ  ನಿರ್ಮಲ ಸ್ಪರ್ಶ ತಟ್ಟಿರಬೇಕು. ಆತನೂ ಒಂದು ಕ್ಷಣ ಬೆರಗಿನಿಂದ ಕಣ್ಣು ಬಿಟ್ಟಂತಾಯಿತು. ನಿನ್ನ ಮುಖದ ಸ್ವರ್ಣದೀಪ್ತಿ ಇನ್ನಷ್ಟು ಉಜ್ವಲವಾಯಿತು.
ಕವಿಕಲ್ಪನೆ ಉದಿಸಲು ಇನ್ನೇನು ಬೇಕು. ಇಂತಹ ಸ್ನಿಗ್ಧ  ಮುಖವೊಂದು ಕವಿಯಲ್ಲಿ ಕಲ್ಪನೆಗಳನ್ನು ಮೂಡಿಸದಿದ್ದೀತೆ? ಕವಿಗಳು ಸಂಜೆ ರಂಗಿನಲ್ಲಿ ಮಿಂದ ಸುಂದರಿಯರನ್ನು ಏನೇನೋ ಉಪಮೆಗಳನ್ನು  ನೀಡಿ ಹೊಗಳುವುದರಲ್ಲಿ ಅತಿಶಯೋಕ್ತಿ ಇಲ್ಲವೆಂದು ಆ ಕ್ಷಣವೇ ನನಗನ್ನಿಸಿತು.
ಈಗ ನನ್ನಲ್ಲೂ ಅಂತಹುದೇ ಹಲವಾರು ಉಪಮೆಗಳು  ಮೂಡುತ್ತಿರುವುದೂ ಸುಳ್ಳಲ್ಲ. ಏಕೆಂದರೆ ಅಂತಹ ಅಮೋಘ ಕಲ್ಪನೆಗಳ ಬೀಜ ಬಿತ್ತಿ ಬೆಳೆ ತೆಗೆಯುವುದರಲ್ಲಿ ನಿನಗಾರು ಸಾಟಿ ಹೇಳು.
ಹೇ, ನನಗೊಂದು ಆಸೆಯಿದೆ. ಹೇಳಲಾ?
ಸಂಜೆಯ ಹೊತ್ತು ಕಡಲ ತೀರದಲ್ಲಿ ನಿನ್ನ ಜತೆ ಕೂರಬೇಕು.
ನೀನು ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಿರಬೇಕು....
...ಮತ್ತು ,  ನಾನು ಸೂರ್ಯನಿಗೆ ಬೆನ್ನು ಹಾಕಿ ನಿನ್ನ ಮುಖ ನೋಡುತ್ತ ಕೂರಬೇಕು.
ನಾನು,  ಅಲ್ಲಲ್ಲ , ‘ಸೂರ್ಯ’ ಬ್ರಶ್ ಹಿಡಿದುಕೊಂಡು ನಿನ್ನ ಮುಖದಲ್ಲಿ ಮೂಡಿಸುವ ವರ್ಣ ಚಿತ್ತಾರವನ್ನು ಕಾಣಬೇಕು. ನಿನ್ನ ಮುಖದಲ್ಲಿ  ಬಣ್ಣಗಳ ಕಿರಣಗಳು ನರ್ತಿಸುವುದನ್ನು ಕಾಣಬೇಕು. ವೊದಲಿಗೆ ಹಳದಿ ರಂಗು, ನಂತರ ಅದರ ಮೇಲೆ ಕೇಸರಿ ರಂಗು, ಸ್ವಲ್ಪ ಹೊತ್ತಿನಲ್ಲೆ ಕೆಂಪು, ಹೇ, ಈಗ ಬದಲಾಯಿತು ನೋಡು ಕಪ್ಪು ಮಿಶ್ರಿತ ಕೆಂಪು.....
ಅದೋ ‘ಸೂರ್ಯ’ನಿಗೂ ಪುಳಕ. ನಿನ್ನ ಸುಂದರ ವೊಗದಲ್ಲಿ ವಿವಿಧ ರಂಗು ಮೆತ್ತತೊಡಗಿದಂತೆ ಅದೇಕೋ ಉತ್ಸಾಹ ತುಂಬಿಕೊಂಡವನಂತೆ  ಹೊಸ ಹೊಸ ಬಣ್ಣಗಳನ್ನು ತನ್ನ ಸಂಗ್ರಹದಿಂದ ಹೊರ ತೆಗೆಯುತ್ತಿದ್ದಾನೆ. ಅದೆಲ್ಲಿತ್ತೋ ಅವನ ಸಂಗ್ರಹದಲ್ಲಿ ಅಷ್ಟೊಂದು ಬಣ್ಣಗಳು.
ಬಣ್ಣ ! ಬಣ್ಣ ! ಬಣ್ಣ! ತರಹೇವಾರಿ ಬಣ್ಣಗಳು. ಕಾಮನಬಿಲ್ಲಿನಲ್ಲಿ ಸೃಷ್ಟಿಸುವ ಎಲ್ಲಾ ಬಣ್ಣಗಳನ್ನೂ ಹೊರತೆಗೆದು ತನ್ಮಯತೆಯಿಂದ ಲೇಪಿಸುತ್ತಿದ್ದಾನೆ.
ಪ್ರತಿಯೊಂದು ಬಣ್ಣ ಲೇಪಿಸಿಕೊಂಡಾಗಲೂ ನೀನು ಪುಟ್ಟ  ಮಕ್ಕಳಂತೆ ಮೆತ್ತಗೆ ಅದೇ ನಿರ್ಮಲ ನಗು ಚೆಲ್ಲುತ್ತಾ  ನಗುತ್ತ ಆನಂದಿಸುತ್ತಿದ್ದೀಯಾ.
ಹರ್ಷದಿಂದ ಮಿನುಗುವ ಆ ಕಂಗಳಲ್ಲಿ ಮುಳುಗುವ ಸೂರ್ಯ ಪ್ರತಿಫಲಿಸುತ್ತಿದ್ದಾನೆ....
ಹೇ, ಇಷ್ಟೆಲ್ಲ ಆಗುವಾಗ ಒಂದೇ ಒಂದು ಭಯ. ಆ ಸೂರ್ಯ ತನ್ನ ಕೆಲಸ ಮರೆತು ನಿನ್ನ ಮುಖಕ್ಕೆ ಬಣ್ಣ ಮೆತ್ತುವುದರಲ್ಲೆ ಮಗ್ನನಾಗಿಬಿಟ್ಟರೆ... ಕಡಲಿಗೆ ಇಳಿಯಲೇ ಮರೆತು ಬಿಟ್ಟರೆ...
ಸೂರ್ಯನನ್ನು ಆಲಂಗಿಸಲು ಕಾದಿರುವ ಕಡಲಿಗೆ ಸಿಟ್ಟು ಬರದಿದ್ದೀತೆ? ಅತ್ತ ಹಗಲಾಗಲೆಂದು ಕಾದಿರುವ ಪಶ್ಚಿಮದ ನಾಡಿನ ಜನರಿಗೆ ಆತಂಕವಾಗದಿದ್ದೀತೆ? ಪೂರ್ವದಿಂದ ಮೇಲೇರಲು ಕಾದಿರುವ ಚಂದ್ರನಿಗೆ ಅವಸರವಾಗದಿದ್ದೀತೆ? ತಾಯಿ ಹಕ್ಕಿ ಗೂಡಿಗೆ ಬರಲೆಂದು ಕಾದಿರುವ ಮರಿಹಕ್ಕಿಗಳಿಗೆ ಭೀತಿಯಾಗದಿದ್ದೀತೆ?
ಮತ್ತು.... ಅತ್ಯಂತ ಪ್ರಮುಖವಾಗಿ  ಸೂರ್ಯನ ಆಟ ನನಗೆ ಅಸೂಯೆ ಮೂಡಿಸದಿದ್ದೀತೆ? ನನ್ನ ಕಣ್ಮುಂದೆಯೆ ಆತ ಈ ರೀತಿ ತನ್ನ ಕರ್ತವ್ಯ ಮರೆತು ನನ್ನ ‘ಹುಡುಗಿ’ಯನ್ನು  ತನ್ಮಯನಾಗಿ ನೋಡುತ್ತ ಕೂರುವುದು ಸರಿಯೆ?
ಊಹೂಂ... ಅದು ಬೇಡ. 
ಹೇ, ಒಂದು ಕೆಲಸ ಮಾಡೋಣ. ಸೂರ್ಯನನ್ನು ಅವನ ಕರ್ತವ್ಯಕ್ಕೆ ಕಳಿಸಿಬಿಡೋಣ. ಆತ ಬೇಡ.
ಇನ್ನೀಗ ನಿನ್ನ ವದನಕ್ಕೆ ನಾನೆ ರಂಗು ಬಳಿಯುತ್ತೇನೆ. ನಾನು ಬಳಿಯುವುದು ಭಾವನೆಗಳ  ರಂಗು. ಅದೇನೂ ಕಷ್ಟವಲ್ಲ. ನಿನ್ನ ಮುಖವು ವಿವಿಧ ಭಾವಗಳನ್ನು ತುಂಬಿಕೊಂಡು ನರ್ತಿಸತೊಡಗಿದಂತೆ ಮತ್ತೆ ಸಪ್ತವರ್ಣದ ಕಾಮನಬಿಲ್ಲು ಮುಖದಲ್ಲಿ ಅರಳುವುದನ್ನು ನಾನು ನೋಡುತ್ತಿದ್ದೇನೆ. ಸಂತೋಷ, ಹಾಸ್ಯ, ಬೆರಗು, ಕುಚೇಷ್ಟೆ, ತುಂಟತನ, ಹುಸಿಮುನಿಸು  ಇತ್ಯಾದಿ ಭಾವಗಳು. (ಆದರೆ ದುಃಖ ಮತ್ತು ಇನ್ನಿತರ ಕೆಲವು ಅನಪೇಕ್ಷಿತ ಭಾವ ಬೇಡವೇ ಬೇಡ.) ಒಂದೊಂದು ಭಾವವೂ ಆ ಮುಖವನ್ನು ಅದೆಷ್ಟು ಸಂಮೋಹಕಗೊಳಿಸುತ್ತಿದೆ ಎಂದು ಬೆರಗುಗೊಳ್ಳುತ್ತಿದ್ದೇನೆ.
ಮತ್ತು...
ಈ ಕ್ಷಣಗಳು ಚಿರಂತನವಾಗಿರಲಿ ಎಂದು ಆಶಿಸುತ್ತಿದ್ದೇನೆ.
ಓ ದೇವರೇ, ಜೀವನದಲ್ಲಿ  ಒಂದೇ ಒಂದು ಬಾರಿಯಾದರೂ ನನಗೆ ಇಂತಹ ಕ್ಷಣವನ್ನು ಒದಗಿಸಿಕೊಡು.
.....
ಥ್ಯಾಂಕ್ಸ್ ಕಣೆ, ಇಂತಹ ಅದ್ಭುತ ಕ್ಷಣಗಳನ್ನು , ಕಲ್ಪನೆಗಳನ್ನು ನನ್ನಲ್ಲಿ ಸೃಷ್ಟಿಸುತ್ತಿರುವುದಕ್ಕೆ.
ಶುಭವಾಗಲಿ.